ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ
ಮಕ್ಕಳ ಕಾವ್ಯ ರಚನಾ ಕಮ್ಮಟ
ಅಕಾಡೆಮಿಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಕ್ಕಳ ಕಾವ್ಯ ರಚನಾ ಕಮ್ಮಟವನ್ನು ಆಯೋಜಿಸಿತ್ತು. ನವೆಂಬರ್ ೭ ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಎ. ಮುರಿಗೆಪ್ಪ ಅವರು ಉದ್ಘಾಟನೆ ಮಾಡಿ , ಆಧುನಿಕ ಜಗತ್ತಿನಲ್ಲಿ ಮಗುವಿನ ಸೃಜನಶೀಲವ್ಯಕ್ತಿತ್ವ ರೂಪಗೊಳ್ಳಲು ಲಯಬದ್ಧ ಮಕ್ಕಳ ಕಾವ್ಯ ಅಗತ್ಯ. ಭಾವಸಂಸ್ಕಾರ ನೀಡುವ ಉತ್ತಮ ಕಾವ್ಯ ಈ ಕಮ್ಮಟದಲ್ಲಿ ಮೂಡಿಬರಲಿ ಎಂದು ಆಶಿಸಿದರು. ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಶಂಕರ ಹಲಗತ್ತಿಯವರು ಮಕ್ಕಳ ಭವಿಷ್ಯವನ್ನು ತನ್ಮೂಲಕ ಕರ್ನಾಟಕದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದನ್ನು ಸಮರ್ಥರೀತಿಯಲ್ಲಿ ನಿರ್ವಹಿಸೋಣ ಎಂದರು. ಅಕಾಡೆಮಿಯ ಯೋಜನಾಧಿಕಾರಿ ನೂರಮನ್ಸೂರ್ ಅವರು ಉಪಸ್ಥಿತರಿದ್ದರು.
ಪರಸ್ಪರ ಪರಿಚಯದೊಂದಿಗೆ ಪ್ರಾರಂಭವಾದ ಈ ಕಮ್ಮಟದಲ್ಲಿ , ಕಮ್ಮಟ ನಿರ್ದೇಶಕರಾದ ಚಂದ್ರಗೌಡ ಕುಲಕರ್ಣಿ ಅವರು ಕನ್ನಡ ಮಕ್ಕಳ ಕಾವ್ಯ ಬೆಳೆದುಬಂದ ಬಗೆಯನ್ನು ವಿವರಿಸಿ, ಮಕ್ಕಳಿಗಾಗಿ ಬರೆಯುವಾಗ ಮಕ್ಕಳಾಗಿಯೇ ಬರೆಯಬೇಕು ಎಂದು ಹೇಳಿ ಅತ್ಯುತ್ತಮ ಕವಿತೆಗಳನ್ನು ಉದಾಹರಿಸಿದರು. ಮಕ್ಕಳಿಗಾಗಿ ಬರೆಯುವುದು ಎಂತಹ ದೊಡ್ಡ ಜವಾಬ್ದಾರಿ ಎಂಬುದನ್ನು ತಿಳಿಸಿದರು.
ಮಕ್ಕಳ ಕಾವ್ಯದ ಆಕರ್ಷಣೆ ಇರುವುದೇ ಅದರ ಲಯಬದ್ಧ ಛಂದಸ್ಸಿನಲ್ಲಿ ಎಂದು ಹೇಳಿ ವೈವಿಧ್ಯಮಯ ಛಂದಸ್ಸನ್ನು , ಹೊಸವಿನ್ಯಾಸದ ಲಯ ಸಾಧ್ಯತೆಗಳನ್ನು ವಿವರಿಸಿ, ಉದಾಹರಿಸಿದವರು-ಮಕ್ಕಳ ಕವಿ ಪ. ಗು. ಸಿದ್ದಾಪುರ ಅವರು. ೨ನೇ ದಿನದ ದ್ಮೊದಲಗೊಷ್ಠಿಯಲ್ಲಿ , ಕೃಷ್ಣ ಮೂರ್ತಿ ಬಿಳಿಗೆರೆಯವರು ಮಕ್ಕಳ ಮನೊಲೋಕ ಎಷ್ಟು ಕ್ರಿಯಾಶೀಲವಾದದ್ದು ಮತ್ತು ಅದ್ಭುತವಾದದ್ದು ಎಂಬುದನ್ನು ಚೇತೋಹಾರಿಯಾಗಿ ನಿರೂಪಿಸಿದರು. ಹಿರಿಯ ಮಕ್ಕಳ ಕವಿಗಳಾದ ಎಂ. ಡಿ. ಗೋಗೇರಿಯವರು ಜನಪದದಲ್ಲಿರುವ ಮಕ್ಕಳ ಸಾಹಿತ್ಯವನ್ನು ಮತ್ತು ಅದರ ವಿಶೇಷತೆಯನ್ನು ವಿವರಿಸಿದರು.
ಆಧುನಿಕ ಮಕ್ಕಳ ಕಾವ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸಿ, ಕಥನಕವನದ ವಿಶೇಷತೆಯನ್ನು ವಿವರಿಸಿ ಕಥನ ಕವನ ರಚನಾ ಕೌಶಲ್ಯವನ್ನು ತಿಳಿಸಿಕೊಟ್ಟವರು ಶ್ರೀ ವಿವೇಕಾನಂದ ಪಾಟೀಲರು. ಅಕಾಡೆಮಿಯ ಸದಸ್ಯರಾದ ನಿಂಗು ಸೊಲಗಿಯವರು ಮಕ್ಕಳ ಕಾವ್ಯ ಪ್ರಸಾರ ಸಾಧ್ಯತೆ ಕುರಿತು ವಿವರಿಸಿದರು. ಮೂಡಲಗಿಯ ಸಂಗಮೇಶ ಗುಜಗೊಂಡ ಅವರು ಮಕ್ಕಳ ಕಾವ್ಯದ ಭಾಷೆ ಹೇಗಿರಬೇಕೆಂಬುದನ್ನು ನಿರೂಪಿಸಿದರು.
ಮಕ್ಕಳ ಕಾವ್ಯಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿರುವ ಶಿಬಿರಾರ್ಥಗಳಿಗೆ ರಾಮಚಂದ್ರ ಪಾಟೀಲ ಮತ್ತು ಡಾ|| ರಾಜೇಂದ್ರ ಗಡಾದ ಅವರು ತಮ್ಮ ಕವನಗಳನ್ನು ವಾಚಿಸಿ ತೋರಿಸಿದರು ಮತ್ತು ಕಾವ್ಯಹುಟ್ಟಾಲು ಪ್ರೇರಣೆ ನೀಡಿದ ಸಂದರ್ಭವನ್ನು ವಿವರಿಸಿದರು.
ಕಮಲಾಪುರದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಮ್ಮಟದಲ್ಲಿ ರಚಿತವಾದ ಕವನಗಳನ್ನು ಓದಿ, ವಿಮರ್ಶಿಸಿ ಮೆಚ್ಚುಗೆಯಾದ - ಮೆಚ್ಚುಗೆಯಾಗದ ಕವನಗಳ ಕುರಿತು ಮಕ್ತವಾಗಿ ಚರ್ಚಿಸಿದ್ದು ಕಮ್ಮಟದ ವಿಶೇಷವಾಗಿತ್ತು. ಕಮ್ಮಟದಲ್ಲಿ ರಚಿತವಾದ ಕವನಗಳನ್ನು ಕವಿಗೋಷ್ಠಿಯಲ್ಲಿ ಓದಲಾಯಿತು. ಒಟ್ಟು ೪೫ ಜನ ಶಿಬಿರಾರ್ಥಿಗಳು ತರಬೇತಿ ಪಡೆದರು. ಹಂಪಿಯ ಪ್ರಾಕೃತಿಕ ಸಹಜ ಪರಿಸರ ಶಿಬಿರಾರ್ಥಿಗಳಿಗೆ ಚೇತೋಹಾರಿ ಉತ್ಸಾಹ ತುಂಬಿತ್ತು.
ನವೆಂಬರ್ ೯ ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಡಾ|| ರಹಮತ್ ತರಿಕೇರಿಯವರು ನವೋದಯ ಕಾಲದ ಮಕ್ಕಳ ಕಾವ್ಯ ಮತ್ತು ಪ್ರಸ್ತುತ ಕಾಲದ ಮಕ್ಕಳ ಕಾವ್ಯದ ವಿಶೇಷತೆಯನ್ನು ತಿಳಿಸಿದರು. ಭಾವತೀವ್ರತೆಯಿಂದ ಕೂಡಿದ ಲಯಬದ್ಧ ರಚನೆ ಮಕ್ಕಳಿಗೆ ಪ್ರಿಯವಾಗುವದರಲ್ಲಿ ಸಂಶಯವಿಲ್ಲ ಎಂದರು. ಸಮಾರಂಭದಲ್ಲಿ ಬಳ್ಳಾರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ|| ಬಾಲರಾಜು ಎಚ್. ಮತ್ತು ಬಳ್ಳಾರಿಯ ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಓಬಳಪ್ಪ ಕೆ.ಎಚ್. ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅಕಾಡೆಮಿ ಯಾವ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲಿದೆ ಎಂಬುದನ್ನು ತಿಳಿಸಿ ಅದರಲ್ಲಿ ತಾವು ಅರ್ಥಪೂರ್ಣ ರೀತಿಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಮಕ್ಕಳ ಕಾವ್ಯಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಪನ್ಮೂಲವ್ಯಕ್ತಿಗಳಿಂದ ಯುವಕವಿಗಳಿಗೆ ಅತ್ಯುಪಯುಕ್ತವಾದ ಮಾರ್ಗದರ್ಶನವನ್ನು ನೀಡಲಾಯಿತು. ಶಿಬಿರಾರ್ಥಿಗಳ ಅಂತರಂಗದ ಭಾವನೆ-ಸಂವೇದನೆಗಳನ್ನು ಸಮರ್ಥರೀತಿಯಲ್ಲಿ ಉದ್ದೀಪಿಸಲಾಯಿತು.
ಅಕಾಡೆಮಿ ಹಾಗೂ ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು / ಸಿಬ್ಬಂದಿವರ್ಗದ ಸಂಘಟನೆ ಅತ್ಯುತ್ತಮ ರೀತಿಯದಾಗಿತ್ತು.
Subscribe to:
Post Comments (Atom)
No comments:
Post a Comment