ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡುವುದು ಪ್ರೌಢರಿಗಾಗಿ ಸಾಹಿತ್ಯ ರಚನೆ ಮಾಡುವುದಕ್ಕಿಂತ ವಿಭಿನ್ನವಾದುದು. ಮಕ್ಕಳ ಮನೋಲೋಕಕ್ಕೆ ಸಂಬಂಧಿಸುವ ಸಂಗತಿಗಳನ್ನು ಮಕ್ಕಳ ಪರಿಭಾಷೆಗೆ ನಿಲುಕುವಂತೆ ಪ್ರಜ್ಞಾಪೂರಕವಾಗಿ ರೂಪಿಸಬೇಕಾಗುತ್ತದೆ. ಹಾಗೆ ರೂಪಿಸುವಾಗ ಮನಸ್ಸು ಮಕ್ಕಳ ಸಹಜ ಭಾವನೆಗಳನ್ನು ಬಿಂಬಿಸುವಂತೆ ಎಚ್ಚರವಹಿಸಬೇಕಾಗುತ್ತದೆ. ಅಷ್ಟೇ ಅಲ್ಲ ಮಕ್ಕಳ ತುಂಟತನ ಸೃಜನಶೀಲತೆ ಎಲ್ಲವೂ ಅಲ್ಲಿ ಅನನ್ಯ ರೀತಿಯಲ್ಲಿ ಮೇಳೈಸಿಕೊಂಡಿರಬೇಕು. ಮಕ್ಕಳ ತುದಿನಾಲಗೆ ಮೇಲಿರುವ ಸಹಜ ಲಯಬದ್ಧ ಶಬ್ದಗಳು ಅವನ ಭಾವನಾ ಲೋಕವನ್ನು ವಿಸ್ತರಿಸುವಂತಿರಬೇಕು. ಅದ್ಭುತ ರಮ್ಯ ರಂಜನೀಯ ಅಂಶಗಳನ್ನು ಒಳಗೊಂಡಿರಬೇಕು. ಒಟ್ಟು ಅವರ ಸಹಜ ಕುತೂಹಲ ತಣಿಸುವಂತಿರಬೇಕು.
ನನ್ನ ರಚನೆ ಮಕ್ಕಳನ್ನು ತನ್ಮಯಗೊಳಿಸಿ ಅವರ ಪ್ರತಿಕ್ರಿಯೆಯನ್ನು ತತಕ್ಷಣದಲ್ಲಿಯೇ ನೀಡುವಂತೆ ಪ್ರೇರೇಪಿಸುತ್ತದೆ. ಹಾಗೆ ಅಭಿವ್ಯಕ್ತಿ ಮತ್ತು ಪ್ರತಿಕ್ರಿಯೆಯಲ್ಲಿ ಸಮತೋಲನದ ಸಾಧಿಸುವಂತೆ ಜಾಗೃತೆವಹಿಸುವೆ.
ಪ್ರಸ್ತುತ ವಿದ್ಯಮಾನಗಳಿಗೆ ಹೊಂದಿಕೆಯೂ ಆಗಬೇಕು ಮತ್ತು ಪರಂಪರೆಯ ದೇಸಿತನ- ಹೊಸತನ ಎರಡನ್ನೂ ಒಳಗೊಂಡಿರರಬೇಕು ಅಲ್ಲದೆ ನನ್ನ ಬರೆಯಲೇಬೇಕಾದ ಅಂಶಗಳೂ ಸೇರಿರಬೇಕು. ಇವೆಲ್ಲವೂ ನಮಗೆ ಗೊತ್ತಿಲ್ಲದೆ ಸುಪ್ತ ರೀತಿಯಲ್ಲಿಯೇ ಸಂಯೋಜನೆಗೊಂಡಿರುತ್ತವೆ: ಸಂಯೋಜನಗೊಳ್ಳಬೇಕು.
ನನ್ನ ಮೊದಲ ಆದ್ಯತೆ ಕವನಕ್ಕೆ. ಕತೆ ಮತ್ತು ನಾಟಕಗಳನ್ನೂ ಬರೆದಿರುವೆ.ಅಲ್ಲದೆ ಮಕ್ಕಳ ಸೃಜನಶೀಲತೆಯನ್ನು ಉದ್ದೀಪನಗೊಳಿಸುವ ಪ್ರಾಸಬಂಧ, ಪದಬಂಧಗಳನ್ನೂ ರಚಿಸಿರುವೆ.
ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿರುವೆ.
ನನ್ನ ಮೊದಲ ಕವನ ಸಂಕಲನವೇ ಅತ್ಯಂತ ಜನಪ್ರಿಯವಾಯಿತು ಮತ್ತು ಕರ್ನಾಟಕ ಸಾಹಿತ್ಯ ಅಕೆಡೆಮಿ ಅಲ್ಲದೆ ಅನೇಕ ಬಹುಮಾನಗಳನ್ನು ಗಳಿಸಿತು. ಅದಕ್ಕೆ ಕಾರಣ ಅದರಲ್ಲಿರುವ ಬಾಲ್ಯ ಸಹಜ ಭಾವನೆಗಳು. ನನ್ನ ಬಾಲ್ಯದ ಅನುಭವಗಳನ್ನು ಅತ್ಯಂತ ಲೀಲಾಜಾಲವಾಗಿ ಸೆರೆಹಿಡಿದ ರಚನೆಗಳವು. ಅನಂತರದ ರಚನೆಗಳೂ ನನ್ನ ಉತ್ತಮ ರಚನೆಗಳೇ ಆಗಿವೆ.
ನನಗೆ ಅತ್ಯಂತ ಪ್ರಿಯವಾದ ಕೃತಿಗಳೆಂದರೆ -`ಬೆಣ್ಣಿ ಹಳ್ಳ', `ಒಗಟು ಬಿಡಿಸೋ ಜಾಣ', `ಟೂ ಟೂ ಬಿಟ್ಟೀನಿ` `ಮತ್ತು ಟಿಂ.ಟಿಂ. ಚುಟುಕು'. `ಬೆಣ್ಣಿಹಳ್ಳದಲ್ಲಿ' ಬಾಲ್ಯಸಹಜ ಗ್ರಾಮೀಣ ಪರಿಸರದ ಭಾವನೆಗಳು ಮಕ್ಕಳನ್ನು ಸೆರೆಹಿಡಿಯುವಷ್ಟು ಸಮರ್ಥವಾಗಿವೆ. `ಒಗಟು ಬಿಡಿಸೋ ಜಾಣ' ಕೃತಿ ಪದಗಳಲ್ಲಿಯ ಅಕ್ಷರಗಳೊಡನೆ ಆಟವಾಡುವ ವಿಶಿಷ್ಟ ಸೃಜನ ಶೀಲ ರಚನೆಯಾಗಿದೆ. ಟೂ ಟೂ ಬಿಟ್ಟೀನಿ ಕೃತಿಯಲ್ಲಿ ಆಧುನಿಕ ಮಗು ಎಲ್ಲ ವಿಷಯಗಳ ಕಡೆ ಹೇಗೆ ಗಮನ ಹರಿಸುತ್ತಲಿರುತ್ತದೆ ಮತ್ತು ಸುತ್ತಲಿನ ಸಂಗತಿಗಳು ಅದರ ಬೆಳವಣಿಗೆಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಚಿತ್ರಿಸುತ್ತದೆ. `ಟಿಂ. ಟಿಂ. ಚುಟುಕು ' ಕೃತಿಯಲ್ಲಿ ಮಗು ಚುಟುಕು ಓದುತ್ತ ತಾನೇ ಬಿಟ್ಟ ಸ್ಥಳದಲ್ಲಿ ಪದವನ್ನು ತುಂಬಿ ಪೂರ್ಣಗೊಳಿಸುತ್ತದೆ. ಮಗು ಓದುತ್ತ ತಾನೂ ಕ್ರಿಯಾಶೀಲವಾಗುವಂತೆ ಪ್ರೇರೇಪಿಸುವುದೇ ಈ ಚುಟುಕುಗಳ ವಿಶೇಷ ! `ಸೊಂಯ್ ಸೊಂಯ್ ಸೊಳ್ಳೆ' ಈ ಕೃತಿ ಜನಪದ ಶಿಶುಪ್ರಾಸಗಳನ್ನು ನೆನೆಪಿಗೆ ತರುತ್ತ ಆಧುನಿಕ ಸಂಗತಿಗಳನ್ನು ಲಯಬದ್ಧವಾಗಿ ಮೆಲುಕು ಹಾಕಲು ಅನುಕೂಲವಾಗುವಂತೆ ರಚಿತವಾಗಿದೆ.
`ಒಗಟು ಬಿಡಿಸೋ ಜಾಣ', `ಟಿಂ. ಟಿಂ. ಚುಟುಕು' ಮತ್ತು ` ಟೂ ಟೂ ಬಿಟ್ಟೀನಿ ' ಕೃತಿಗಳು ನವಕರ್ನಾಟಕ ಪ್ರಕಾಶನದಲ್ಲಿ ದೊರಕುತ್ತವೆ. `ಸೊಂಯ್ ಸೊಂಯ್ ಸೊಳ್ಳೆ' ಧಾರವಾಡದ ಚಿಲಿಪಿಲಿ ಪ್ರಕಾಶನದಲ್ಲಿ ದೊರಕುತ್ತದೆ. `ಬೆಣ್ಣಿಹಳ್ಳ'ದ ಕೆಲವೇ ಪ್ರತಿಗಳು ನನ್ನಲ್ಲಿವೆ.
ಎಲ್ಲ ವಯೋಮಾನದ ಮಕ್ಕಳಿಗೂ ಅನ್ವಯವಾಗುವ ಹಾಗೆ ರಚಿಸಿರುವೆ. ಗ್ರಾಮೀಣ ಮತ್ತು ನಗರದ ಮಕ್ಕಳಿಗೂ ಹಿಡಿಸುವಂತಹ ಸ್ವರೂಪ ನನ್ನ ಕವಿತಗಳಲ್ಲಿದೆ.
ಮಕ್ಕಳ ಸಹಜ ಸ್ವಭಾವ ತುಂಟತನ ಮತ್ತು ಅವರ ಕ್ರಿಯಾಶೀಲತೆಯನ್ನು ಕುತೂಹಲವನ್ನು ತಣಿಸುವಲ್ಲಿ ನನ್ನ ಕೃತಿಗಳು ಯಶಸ್ವಿಯಾಗಿವೆ.
ಮಕ್ಕಳೊಂದಿಗೆ ಸಭೆ ಸಮಾರಂಭಗಳಲ್ಲಿ ಮೇಲಿಂದ ಮೇಲೆ ಬೆರೆಯುವ ಅವಕಾಶವಿರುವದರಿಂದ ಅವರೆದುರು ವಾಚನ ಮಾಡಿ ಅವರ ಪ್ರತಿಕ್ರಿಯೆ ಪಡೆಯುವೆ. ಪತ್ರಿಕೆಯಲ್ಲಿ ಪ್ರಕಟವಾದ ಕವಿತೆಯ ಬಗೆಗೆ ಮಕ್ಕಳಿಂದಲೇ ಉತ್ತಮ ಪ್ರತಿಕ್ರಿಯೆ ಸಿಗತ್ತದೆ.
ಕನ್ನಡ ಭಾಷೆಯಲ್ಲಿ ಶಿಶುಪ್ರಾಸ, ಕಾದಂಬರಿ, ವೈಜ್ಞಾನಿಕ ಸಾಹಿತ್ಯದ ಕೊರತೆ ಇದೆ. ಈಗಿರುವ ರಚನೆಗಳಲ್ಲಿ ಮಕ್ಕಳ ಭಾವನೆಗೆ ಪೂರಕವಾದ ಸೃಜನಶೀಲತೆ ಇಲ್ಲ . ಅವರ ಅನುಭವ ಮತ್ತು ಸೃಜನಶೀಲತೆಯನ್ನು ವಿಸ್ತರಿವ ಕೃತಿಗಳು ಇನ್ನೂ ಬರಬೇಕಿದೆ.
ಮಕ್ಕಳ ಸಹಜ ಕುತೂಹಲ, ಮುಗ್ಧತೆ, ಕ್ರಿಯಾಶೀಲತೆ, ಕನಸುಗಾರಿಕೆ, ಕಲ್ಪನಾರಮ್ಯತೆ, ಫ್ಯಾಂಟಸಿ ಮುಂತಾದವು ಮಕ್ಕಳ ಸಾಹಿತ್ಯಕೃತಿಯನ್ನು ಸಮೃದ್ಧಗೊಳಿಸಬಲ್ಲವು.
ಮಕ್ಕಳ ತಿಳುವಳಿಕೆಗೆ ನಿಲುಕುವಂತೆ ಸರಳವಾಗಿ ಬರೆಯುತ್ತೇನೆಂದು ಕೇವಲ ಶಬ್ದಗಳನ್ನು ಜೋಡಿಸಿ ಪದಗಳನ್ನು ಸಂಯೋಜಿಸಿದರೆ ಅದು ಉತ್ತಮ ಮಕ್ಕಳ ಸಾಹಿತ್ಯವಾಗುವುದಿಲ್ಲ.
ನನ್ನ ಯಾವ ಕವಿತೆಗಳು ಬೇರೆ ಭಾಷೆಗೆ ಭಾಷಾಂತರವಾಗಿಲ್ಲ.
ಕರೆಂಟು ಮಾಮಾ
ಕರೆಂಟು ಮಾಮಾ ಕರೆಂಟು ಮಾಮಾ
ದಯಾ ತೋರೋ ಮರಾಯಾ
ಸಾಲಿ ತಪ್ಪಿಸಿ ಟಿ.ವಿ. ಮುಂದ
ಬಂದ ಕುಂತೇನಿ ದಮ್ಮಯ್ಯ!
ಒಂದರ ಹಿಂದೊಂದ್ ಸರತಿ ಹಚ್ಚಿ
ಉರುಳ್ತಾವೇನೊ ವಿಕೆಟ್ಟು!
ಚೇತನನಂತೆ ಮಾಡ್ಬಹುದೇನೋ
ಯಾರಾದ್ರೂನು ಹ್ಯಾಟ್ರಿಕ್ಕು!
ಬೌಂಡ್ರಿ ಸಿಕ್ಸರ್ ಸೆಂಚುರಿ ನೋಡಬೇಕ್
ಮೂಗಿನ ಮ್ಯಾಲ ಬೆರಳಿಟ್ಟು!
ಅರ್ಧಂಬರ್ಧ ನೋಡೋದ್ರಾಗ್
ಹೋಗೇ ಬಿಡಬ್ಯಾಡ ಕೈಕೊಟ್ಟು!
ಅಪ್ಪ ಅಮ್ಮ ಸಾಲಿ ಮೇಷ್ಟ್ರು
ಎಲ್ಲರ ಕೂಡ ಬಯ್ಸಾಕ!
ವಾರ್ಷಿಕ ಪರೀಕ್ಷೆ ವಿಶ್ವ ಕಪ್
ಏಕ ಕಾಲಕ್ಕ ಬರಬೇಕ!
ಕರೆಂಟು ಮಾಮಾ ಕೈ ಮುಗಿತೀನಿ
ದಯಾ ತೋರೋ ಮರಾಯ!
ಪರೀಕ್ಷೆ ಕ್ರಿಕೆಟ್ ಮುಗಿಯೋತಂಕ
ವಸತಿ ಹೂಡಿಬಿಡು ದಮ್ಮಯ್ಯ!
*****
ಟೂ ಟೂ ಬಿಟ್ಟೀನಿ
ಅಮ್ಮಾ ನನಗೆ ರೆಕ್ಕೆ ಹಚ್ಚು
ಹಾರುವೆ ಗಗನಕ್ಕೆ !
ಚುಕ್ಕು ಚಂದ್ರರ ಕರೆದು ತರುವೆ
ಗೋಲಿ ಆಟಕ್ಕೆ !
ಯಾಕೋ ಪುಟ್ಟು ಚಿಂಕು ಪಿಂಕು
ಇಲ್ವೇನ್ ಆಟಕ್ಕೆ !
ಹಗಲು ರಾತ್ರಿ ಟಿ. ವಿ. ಮುಂದೆ
ಕೂಡ್ತಾರೆ ನೋಡೋಕೆ !
ಎಷ್ಟು ಕರೆದ್ರು ಬರೋದೆ ಇಲ್ಲ
ನನಕೂಡ ಆಡೋಕೆ !
ಅದಕೆ ಅಮ್ಮ ಚಿಂಕು -ಪಿಂಕೂನ
ಟೂ ಟೂ ಬಿಟ್ಟೀನಿ!
ಚುಕ್ಕಿ ಚಂದ್ರರ ಕರಕೊಂಡ್ ಬಂದ
ಆಟ ಆಡ್ತೀನಿ !
*****
ಟಿಂ ಟಿಂ ಟಿಂ ಟಿಂ ಇದ್ರೆ!
ಹಕ್ಕಿಯಂತೆ ರೆಕ್ಕೆ ಇದ್ರೆ
ಗಕ್ಕನೆ ಗಗನಕ್ಕೆ ಹಾರತಿದ್ದೆ!
ಫಳ ಫಳ ಹೊಳೆಯುವ ಚುಕ್ಕೆಯ ಜೋಡಿ
ಕಣ್-ಮುಚ್ಚಾಲೆ ಆಡ್ತಿದ್ದೆ!
ಚಿನ್ನದ ರನ್ನದ ಕೊಕ್ಕೊಂದಿದ್ರೆ
ಸಿಹಿ ಸಿಹಿ ಹಣ್ಣಿನೆ ಕುಕ್ಕತಿದ್ದೆ!
ಬನಬನಗಳಲಿ ಗೂಡನು ಕಟ್ಟಿ
ಪುಟಾಣಿ ಮರಿಗಳ ಸಾಕತಿದ್ದೆ!
ಮಿರಿಮಿರಿ ಮಿಂಚಿನ ಪುಕ್ಕ ಇದ್ರೆ
ಹೂವಿಂದ ಹೂವಿಗೆ ಹಾರತಿದ್ದೆ!
ಮಲ್ಲಿಗೆ ಸಂಪಿಗೆ ಕೇದಗೆ ಜಾಜಿಯ
ಗಮಗi ಗಂಧ ಸವಿತಿದ್ದೆ!
ಸಾವಿರ ಸಾವಿರ ಕಣ್ಣುಗಳಿದ್ರೆ
ಗರಿಗೆದರಿ ಆಟ ಆಡತಿದ್ದೆ!
ನೆತ್ತಿಯ ಮೇಲಿನ ಜುಟ್ಟವ ಬಳುಕಿಸಿ
ಥಳಕಿನ ನಾಟ್ಯವ ಮಾಡತಿದ್ದೆ!
ಟಿಂ ಟಿಂ ಟಿಂ ಟಿಂಇದ್ರೆ
ಕವನ-ಗಿವನ ಬರಿತಿದ್ದೆ!
ಕೋಗಿಲೆಯಾಗಿ ಪಂಚಮ ಸರದಿ
ಕುಹೂ ಕುಹೂ ಹಾಡತಿದ್ದೆ!
*******
ಸೊಳ್ಳೆ
ಸೊಂಯ್ ಸೊಂಯ್ ಸೊಳ್ಳೆ
ಮೈತುಂಬ ಗುಳ್ಳೆ
ರೊಜ್ಜು ರಾಡಿ ಹೊಲಸು
ಇದ್ದರೆ ನಿನಗೆ ಸೊಗಸು
ಸೂಜಿ ಸೊಂಡಿ ಚುಚ್ಚಿ
ರಕ್ತ ಹೀರತಿ ಗಚ್ಚಿ
ಥಂಡಿ ಥಂಡಿ ಜ್ವರ
ಹಬ್ಬಿಸೂವಂತ ಶೂರ
ಸೊಂಯ್ ಸೊಂಯ್ ಸೊಳ್ಳೆ
ಮೈತುಂಬ ಗುಳ್ಳೆ.
********
ಮಂಗನ ನ್ಯಾಯ
ಜೋಡಿ ಬೆಕ್ಕು
ಕೂಡಿಕೊಂಡು
ಬೆಣ್ಣೆ ಗಡಿಗೆ ಕದ್ದವು
ನನಗೆ ಹೆಚ್ಚು
ತನಗೆ ಹೆಚ್ಚು
ಎನುತ ಜಗಳ ಕಾಯ್ದವು
ಹೊಂಚು ಹಾಕಿ
ಕುಟಿಲ ಮಂಗ
ನ್ಯಾಯ ಹೇಳ ಬಂದಿತು
ತೂಕ ಮಾಡಿ
ಕೊಡುವೆ ನಾನು
ಪರಡಿ ತನ್ನಿ ಎಂದಿತು
ಆಚೆ ಈಚೆ
ಬೆಣ್ಣೆ ಹಚ್ಚಿ
ಪರಡಿ ತೂಗಿ ನೋಡಿತು
ಅದಕೆ ಇದಕೆ
ಹೆಚ್ಚು ಎಂದು
ಗುಳುಂ ಗುಳುಂ ನುಂಗಿತು
ಹಾಗು ಹೀಗು
ಮಾಡಿ ಮಂಗ
ತಾನೆ ತಿಂದು ತೇಗಿತು
ಗಡಗಿ ಒಡೆದು
ಪರಡಿ ಚೆಲ್ಲಿ
ಗಿಡದ ಮೇಲೆ ಹಾರಿತು
ಮರುಳತನದಿ
ಜಗಳ ಆಡಿ
ಹಂಚಿಕೊಂಡು ತಿನ್ನವು
ಮಂಗನಿಂದ
ಮೋಸ ಹೋದ
ಮೇಲೆ ಬುದ್ಧಿ ಕಲಿತವು
****
ಏನಿದು?
ಪುಟ್ಟ ಒಮ್ಮೆ
ಕಟ್ಟಿ ಮ್ಯಾಲೆ
ತಿನ್ನಾಕ್ ಕುಂತಿದ್ದ ರೊಟ್ಟಿ !
ಪಟ್ಟಂತ ಕೈ
ಜಾರಿ ಹೋಗಿ
ಮುಗಿಲಿಗೆ ಅಂಟೇತಿ ಗಟ್ಟಿ !
****
ಪುಟ್ಟಿ -ಬುಟ್ಟಿ
ನಸುಕಲಿ ಎದ್ದು
ಕವನ ಬರೆಯಲು
ಕುಳಿತಳು ನಮ್ಮ ಪುಟ್ಟಿ !
ಬರದೇ ಬರೆದಳು
ಹರಿದೇ ಹರಿದಳು
ತುಂಬಿತು ಕಸದ ಪುಟ್ಟಿ !
****
ಒಗಟು !
ಅಕ್ಷರವು ಮೂರು
ಹೊಂದಿರುವ ಶಬ್ದ
ಬದುಕು ಎಂಬರ್ಥದೊಳಗ !
ಒಗಟನ್ನು ಬಿಡಿಸು
ಪದವನ್ನು ಹುಡುಕಿ
ಕೊಡಬೇಕು ನೀವು ನನಗ !
ಮೊದಲೆರಡು ಕೂಡಿ
ಮುದದಿಂದ ನುಡಿಯೆ
ಪ್ರಾಣ ಎನುವರ್ಥ ಆಗ !
ಕೊನೆ ಎರಡು ಸೇರಿ
ಗುಂಪಾಗಿ ಬೆಳೆದ
ಕಾನನವು ತೋಪಿನೊಳಗ !
ಮೊದಲಿಗೆ ಕೊನೆ
ಅಕ್ಷರವು ಸೇರಿ
ಜಿಪುಣ ಎಂಬರ್ಥ ನೋಡು !
ಪದವಿರುವದೊಂದೆ
ಅರ್ಥಗಳು ನಾಲ್ಕು
ಅಡಗಿಹವು ಪತ್ತೆ ಮಾಡು !
ನನ್ನ ಕ್ರಿಕೆಟ್
ಸೂರ್ಯ ಮಂಡಲ ಕರೆದು ತರುವೆ
ನನ್ನಯ ಕ್ರಿಕೆಟ್ ಆಟಕ್ಕೆ !
ಅಹಾ ! ಅದ್ಭುತ ಆಟವ ಆಡಿ
ಹೊಸರುಚಿ ಕಲಿಸುವೆ ಲೋಕಕ್ಕೆ !
ಚುಕ್ಕೆಗಳೆಲ್ಲ ಫೀಲ್ಡರ್ ಆಗಲಿ
ಕ್ಷೇತ್ರ ರಕ್ಷಣೆ ಮಾಡೋಕೆ !
ಗೌಸು ಧರಿಸಿ ಶುಕ್ರನು ನಿಲ್ಲಲಿ
ವಿಕೆಟ್ ಕೀಪರ್ ಸ್ಥಾನಕ್ಕೆ !
ಸೂರ್ಯ ಚಂದ್ರರು ಅಂಪೈರಾಗಲಿ
ನನ್ನನು ಆಟದಿ ಗೆಲ್ಸೋಕೆ !
ಔಟ್ ಆದ್ರೂನು ಸುಮ್ಮ ನಿಂತಿರಲಿ
ಎತ್ತದೆ ಕೈಯನು ಮೇಲಕ್ಕೆ !
ಬೌಂಡರಿ ಗೆರೆಯು ಚಿಕ್ಕದಾಗಿರಲಿ
ಭರ್ಜರಿ ಸಿಕ್ಸರ್ ಬಾರ್‍ಸೋಕೆ !
ಹಾಕಿದ ಚಂಡು ಪುಟಿದು ಬರಲಿ
ನನ್ನಯ ಬ್ಯಾಟಿನ ಸರಿಸಮಕೆ !
ನಾಲ್ಕೆ ಹೆಜ್ಜೆಯ ಅಂಕಣವಿರಲಿ
ಬೇಗ ಓಡಿ ಮುಗಿಸೋಕೆ !
ಫೀಲ್ಡರ್ ಕೈಗೆ ಸಿಗದೆ ಜಾರಲಿ
ಬಾರ್‍ಸಿದ ಚಂಡು ಆ ನೆಲಕೆ !
ಧೂಮಕೇತು ನಕ್ಷತ್ರ ಮಂಡಲಿ
ಪ್ರೇಕ್ಷಕರಾಗಲಿ ನೋಡೋಕೆ !
ವಿಶ್ವದ ಜನರು ಜೊತೆಯಲಿ ಸೇರಲಿ
ಆಟದ ರಂಜನೆ ಸವಿಯುದಕೆ !
*****
*****
ಚಂದ್ರಗೌಡ ಕುಲಕರ್ಣಿ,
ಚಿಲಿಪಿಲಿ, ಖಾಸ್ಗತ ನಗರ, ತಾಳಿಕೋಟಿ-೫೮೬೨೧೪, ವಿಜಾಪುರ ಜಿಲ್ಲೆ, ಕರ್ನಾಟಕ ರಾಜ್ಯ.
ದೂರವಾಣಿ- ೦೮೩೫೬-೨೬೬೮೦೮ , chandragoudak@gmail.com
Subscribe to:
Post Comments (Atom)
No comments:
Post a Comment